ತಾಯಿಯ ಪ್ರೇಮ – ಆತ್ಮೀಕ ಕಥೆ -1

  Posted on   by   3 comments

mother-love-movies

ಒಬ್ಬ ತರುಣಿಯು ತನ್ನ ಊರನ್ನೂ ಮನೆಯನ್ನೂ ತನ್ನ ಕ್ರೈಸ್ತ ತಂದೆ ತಾಯಿಗಳನ್ನೂ ಬಿಟ್ಟು ದೊಡ್ಡದೊಂದು ಊರಿನಲ್ಲಿ ಒಂದು ಉದ್ಯೋಗವನ್ನು ಮಾಡಬೇಕೆಂದು ಅಲ್ಲಿಗೆ ಹೋದಳು. ಸ್ವಲ್ಪ ದಿನಗಳಾಗುವದರಲ್ಲಿಯೇ ಆಕೆಯು ದುಶ್ಚಾಳಿಯಲ್ಲಿ ಬಿದ್ದಳು. ಅವಳು ತಾಯಿಗೆ ಪತ್ರ ಬರೆಯುವದನ್ನು ಕಡಿಮೆ ಕಡಿಮೆ ಮಾಡುತ್ತಾ ಕಡೆಗೆ ಪೂರ್ಣವಾಗಿ ನಿಲ್ಲಿಸಿಬಿಟ್ಟಳು. ತಾಯಿಯು ತನ್ನ ಮಗಳನ್ನು ಹುಡುಕಬೇಕೆಂದು ಆ ದೊಡ್ಡ ಪಟ್ಟಣಕ್ಕೆ ಬಂದು, ಬೀದಿ ಬೀದಿಗಳನ್ನೂ ಓಣಿ ಓಣಿಗಳನ್ನೂ ತಿರುಗಿ, ಎಷ್ಟೋ ರೀತಿಯಿಂದ ಹುಡುಕಿದರೂ ಮಗಳು ಇರುವದರ ಸುಳಿವೆ ಗೊತ್ತಾಗಲಿಲ್ಲ. ಅವಳು ಮಾರ್ಗದಲ್ಲಿ ಕೂತುಕೊಂಡು ಬರುವ ಹೋಗುವ ಜನರ ಮುಖಗಳನ್ನು ಪರಿಶೋಧಿಸಿದರೂ ಎಲ್ಲಾ ಶ್ರಮವು ವ್ಯರ್ಥವಾಯಿತು. “ಮಗಳನ್ನು ಕಂಡುಕೊಂಡೇನು” ಎಂಬ ಆಶೆ ಎಲ್ಲವೂ ಭಂಗವಾಗಿಹೋಯಿತು. ಕೈಯಲ್ಲಿದ್ದ ಹಣವೆಲ್ಲವೂ ಖರ್ಚಾಗಿ ಹಿಂದಿರುಗಿ ಮನೆಗೆ ಹೋಗಲಿಕ್ಕೆ ರೈಲು ಗಾಡಿಯ ಖರ್ಚಿನ ಲೆಕ್ಕ ಮಾತ್ರ ಹತ್ರದಲ್ಲಿ ಉಳಿಯಿತು. ಅದಕ್ಕಾಗಿ ಅವಳು ಕಡೆಗೆ ಅಂಗಡಿಯಲ್ಲಿ ಇರಿಸಬೇಕೆಂದು ನಿರ್ಣಯಿಸಿ ಸಾರಾಯಿ ಮಾರುವ ಎಲ್ಲಾ ಅಂಗಡಿಯವರಿಂದ ಅಪ್ಪಣೆಯನ್ನು ತೆಗೆದುಕೊಂಡು ಚಿತ್ರವನ್ನು ತೆಗೆಯಿಸಿ ಗೋಡೆಗಳಿಗೆ ಹಚ್ಚಿಸಿ ಮನೆಗೆ ಹೊರಟುಹೋದಳು. ಆಕೆಯು ಮಾಡಿದ ಈ ವಿಶೇಷ ಕಾರ್ಯದಲ್ಲಿ ದೇವರ ಪರಿಪಾಲನೆಯ ಹಸ್ತವು ಇದ್ದದರಿಂದ ಅದು ಬೇಗನೆ ಫಲಕ್ಕೆ ಬಂತು. ಹೇಗಂದರೆ ತಾಯಿಯು ಮನೆಗೆ ಹೊರಟು ಹೋದ ಸ್ವಲ್ಪ ಸಮಯದಲ್ಲಿಯೇ ಆ ಹುಡುಗಿಯು ತನ್ನನ್ನು ಪ್ರೀತಿಸುತ್ತಿದ್ದ ಒಬ್ಬ ಸಖನ ಸಂಗಡ ಕುಡಿಯಲು ಒಂದು ಸಾರಾಯಿ ಅಂಗಡಿಗೆ ಬಂದಳು. ಅಲ್ಲಿ ಗೋಡೆಗೆ ಮೊಳೆಗಳಿಂದ ಜಡಿದ ಚಿತ್ರದಲ್ಲಿ ತನ್ನ ಸ್ವಂತ ತಾಯಿಯ ಮುಖ ರೂಪವನ್ನು ಅವಳು ನೋಡಿದಳು. ಮಾತ್ರವಲ್ಲದೆ ಅದರ ಕೆಳಗಡೆಯಲ್ಲಿ “ನಿನ್ನ ತಾಯಿಯು ನಿನ್ನನ್ನು ಇದುವರೆಗೂ ಪ್ರೀತಿಸುತ್ತಿರುವಳು” ಎಂಬ ಮಾತನ್ನು ಓದಿದಳು. ಅದು ತನ್ನ ಸ್ವಂತ ತಾಯಿಯ ಕೈಬರಹವೇ ಎಂದು ತಿಳಿದು ಅವಳು ಬಹಳವಾಗಿ ಅತ್ತಳು. ಮತ್ತು ಆ ಕ್ಷಣದಲ್ಲಿಯೇ ತನ್ನ ಪ್ರಿಯ ಸುಖವನ್ನೂ ಆ ಸಾರಾಯಿಯ ಅಂಗಡಿಯನ್ನೂ ಬಿಟ್ಟು ಮನೆಗೆ ಹೊರಟುಬಂದಳು. ತಾಯಿಯು ಆಕೆಯ ಅಪರಾಧವೆಲ್ಲವನ್ನು ಕ್ಷಮಿಸಿ ಬಹು ರೀತಿಯಿಂದ ಎಚ್ಚರಿಸಿ ಕ್ರಿಸ್ತನ ಬಳಿಗೆ ನಡಿಸಿದ್ದರಿಂದ ಮಾನಸಾಂತರಪಟ್ಟು ಹೊಸ ಜೀವಿತದಲ್ಲಿ ಬೆಳೆದಳು. ತಾಯಿಯ ಪ್ರೀತಿಯು ಎಷ್ಟು ಅಧಿಕವಾಗಿದೆ ಎಂದು ನಾವು ತಿಳಿದು ಆಶ್ಚರ್ಯಪಟ್ಟರೆ ನಮ್ಮ ಪರಲೋಕದ ತಂದೆಯ ಪ್ರೀತಿಯ ಬಲವು ನಮ್ಮ ಒಬ್ಬೊಬ್ಬರ ವಿಷಯದಲ್ಲಿಯೂ ಅದಕ್ಕಿಂತ ಅಧಿಕವಾಗಿದೆ ಎಂದು ತಿಳಿಯಬೇಕಲ್ಲವೇ?

Categories: Spiritual Stories

3 comments

  1. Samuel says:

    ತಾಯಿಯಂತೆ ಪ್ರೀತಿಸುವ ದೇವರು,ಆಮೆನ್

Comments

Your email address will not be published. Required fields are marked *

WhatsApp us