ದೇವರಿಗಾಗಿ ಹುಡುಕುತ್ತಿದ್ದ ತತ್ವ ಶಾಸ್ತ್ರಜ್ಞ  – ಜಸ್ಟಿನ್ ಮಾರ್ಟಿರ್ 

  Posted on   by   No comments

       ಜಸ್ಟಿನ್  ಕ್ರಿ. ಶ  2 ಶತಮಾನದ ತತ್ವಶಾಸ್ತ್ರಜ್ಞ. ಒಮ್ಮೆ ಈತ ವಿದ್ಯಾವಂತನಾದ ಒಬ್ಬ ವ್ಯಕ್ತಿಯ ಭಾಷಣ ಕೇಳಲು ಹೋದ. ಭಾಷಣಕಾರನು ಮಾತಾಡುತ್ತಾ “ಸತ್ಯ ನಜರೇತಿನ ಯೇಸುವನ್ನು ಹಿಂಬಾಲಿಸುವವರು ಕೇವಲ ಮೂಢನಂಬಿಕೆ ಹೊಂದಿದ ಮೂರ್ಖರು. ಅವರು ಆಕಾಶ ಮಂಡಲದ ಮೋಡ ಮುಂತಾದವುಗಳನ್ನು ಆರಾಧಿಸುತ್ತಾರೇ ವಿನಃ ಮತ್ತೇನನ್ನೂ ಅಲ್ಲ.ಅವರು ಇಡೀ ದೇಶಕ್ಕೆ ಅಪಾಯ ಎಂದು ನಾನು ಹೇಳಬಯಸುತ್ತೇನೆ”. ಎಂದನು. 
        
 ಕುಳಿತ್ತಿದ್ದ ಜನರು ಈ ಮಾತಿಗೆ ತಲೆತೂಗಿದರು. ಆದರೆ ಅಷ್ಟು ಬೇಗನೆ ಇದನ್ನು ಒಪ್ಪಿಕೊಳ್ಳಲು ಜಸ್ಟಿನ್ ನ ಮನಸ್ಸು ಒಪ್ಪಲಿಲ್ಲ. “ಭಾಷಣಕಾರನ ಮಾತು ನಿಜವೇ ?  ಕ್ರೈಸ್ತರು ಯಥಾರ್ಥರು. ಕೊಪ್ಪರಿಕೆಯಲ್ಲಿ ಕುದಿಯುತ್ತಿರುವ ಎಣ್ಣೆಗೆ ತಮ್ಮನ್ನು ಎಸೆಯುತ್ತಾರೆ ಎಂದು ತಿಳಿದಿದ್ದರೂ ತಮ್ಮ ನಂಬಿಕೆಯನ್ನು ತೊರೆಯದ ಜನರು ” ಎಂದು ಈತ ತನ್ನ ಪ್ರತಿಕ್ರಿಯೆ ವ್ಯಕ್ತಪಡಿಸಿದ. 
          
   ಅವರಲ್ಲಿ ಒಬ್ಬನು ” ಜಸ್ಟಿನ್, ನೀನೂ ಕ್ರೈಸ್ತನಾಗಬೇಕೆಂದಿರುವೆಯಾ ? ಎಂದು ಪ್ರಶ್ನಿಸಿದ. ” ನಾನು ಸತ್ಯ ತಿಳಿದುಕೊಳ್ಳಬೇಕು ” ಎಂದು ಜಸ್ಟಿನ್ ನಯವಾಗಿ ಉತ್ತರಿಸಿದ. ಚಿಕ್ಕಂದಿನಲ್ಲೇ ಸತ್ಯ ತಿಳಿಯಲು ಪ್ರಯತ್ನಿಸತೊಡಗಿದ ಜಸ್ಟಿನನಿಗೆ ಇಡೀರೋಮ್ ಸಾಮ್ರಾಜ್ಯವನ್ನು ಸಂಚರಿಸಲು ಬೇಕಾದಷ್ಟು ಹಣ ಇತ್ತು. ಆ ಕಾಲದಲ್ಲಿ  ವ್ಯಾಪಾರಿಗಳು ಸಂಚರಿಸುತ್ತಿದ್ದಲ್ಲೆಲ್ಲ ಜಸ್ಟಿನನು ಪರಿಚಿತನಾದ ಪ್ರಯಾಣಿಕನಾದ. ಆದರೆ ಜ್ಞಾನ, ಸತ್ಯ ಇವುಗಳನ್ನು ತಿಳಿಯಲು ಹೋದ ಕಡೆಯಲ್ಲೆಲ್ಲಾ ಕ್ರೈಸ್ತರ ಅಚಲ ನಂಬಿಕೆ ಇವನನ್ನು ಆಕರ್ಷಿಸಿತು. 
         
 “ಜೀವನದಲ್ಲಿ ಮುಖ್ಯವಾದದ್ದೇನು ?” ಜಸ್ಟಿನ್ ಸ್ರೋಯಿಕ್ ಪಂಥದವರೊಬ್ಬರನ್ನು ಪ್ರಶ್ನಿಸಿದ. ಜಗತ್ತು ದೇವರ ದೇಹ ಎಂದು ಸ್ರೋಯಿಕ್ ಪಂಗಡದವರು ನಂಬುತ್ತಾರೆ. ” ನಿನ್ನ ನೈತಿಕ ಜೀವನ ” ಎಂದು ಉತ್ತರಿಸಿದ. ಈ ಪ್ರಪಂಚವನ್ನು ತೊರೆದು ಪರಿಶುದ್ಧ ಆತ್ಮಗಳ ಜಗತ್ತಿಗೆ ಹೋಗಿ ದೇವರಂತಾಗು ಎಂದು ಪ್ಲೇಟೋ ತತ್ವಜ್ಞಾನಿಯ ಶಿಷ್ಯನೊಬ್ಬ ಈತನಿಗೆ ಸಲಹೆ ಕೊಟ್ಟ.ಜಸ್ಟಿನ್ ಇದಕ್ಕಾಗಯೇ ಪ್ರಯತ್ನಿಸುತ್ತಿದ್ದರೂ ತನ್ನ ದೈಹಿಕ ಇಚ್ಛೆಗಳನ್ನು ತೊರೆಯಲಾರದೆ ಹೋದೆ. 
 ಪ್ರಖ್ಯಾತ ಉಪಾಧ್ಯಾಯರ ಯಾವ ಉಪದೇಶವೂ ಅವನಿಗೆ ತೃಪ್ತಿ ಕೊಡಲಿಲ್ಲ. ಜೀವನದ ಅರ್ಥವೇನು ? ದೇವರಿದ್ದಾನೆಯೋ ? ದೇವರಲ್ಲಿದ್ದಾನೆ ? ಎಂಬ ಪ್ರಶ್ನೆಗಳನ್ನು ಅವನು ಪದೇ ಪದೇ ಕೇಳತೊಡಗಿದನು. ತನಗೆ ತಿಳಿದಿದ್ದ ದೃಢಕ್ರೈಸ್ತರ ಕುರಿತು ಅವನ ಮನಸ್ಸು ಆಲೋಚಿಸ ತೊಡಗಿತು . ಆ ಕಾಲದಲ್ಲಿ ಕ್ರೈಸ್ತ ಧರ್ಮವನ್ನು ಅನುಸರಿಸುವುದು ಕಾನೂನು ಬಾಹಿರವಾಗಿತ್ತು. ಸಾವಿರಾರು ಜನರು ಕಗ್ಗೊಲೆಯಾದರು. ಕ್ರೈಸ್ತರು ಕೇವಲ ಮುಗ್ದರು, ಅವರಿಗಾಗುವ ಹಿಂಸೆ ಅನ್ಯಾಯ ಎಂಬ ಮನವರಿಕೆ ಜಸ್ಟಿನನಿಗಾಯಿತು. ಒಂದು ವೇಳೆ ಕ್ರೈಸ್ತರು ತಪ್ಪು ಮಾರ್ಗದರ್ಶನದಲ್ಲಿ ಹೋಗುತ್ತಿರಬಹುದು. ಆದರೆ ಖಂಡಿತವಾಗಿ ಅವರು ದೇಶಕ್ಕೆ ಅಪಾಯಕಾರಿಯಲ್ಲ ಮತ್ತು ದೇಶದ್ರೋಹಿಗಳಲ್ಲ ಎಂದು ಖಚಿತವಾಯಿತು. 
           
            ಒಮ್ಮೆ ಈತ ಎಫೆಸ ನಗರದ ಬಯಲೊಂದರಲ್ಲಿ ಒಬ್ಬಂಟಿಗನಾಗಿ ಗಾಳಿ ವಿಹಾರಕ್ಕೆ ಹೊರಟ. ಈತನನ್ನು ವೃದ್ಧನೊಬ್ಬ ಹಿಂಬಾಲಿಸತೊಡಗಿದ. ಈತ ಹಿಂತಿರುಗಿ ಆ ವೃದ್ಧನನ್ನು ನೋಡಿದ. 
      
       ‘ ಹೀಗೇಕೆ ನೋಡುತ್ತಿರುವೆ ? ‘ ಎಂದ ವೃದ್ಧ. 
       
       ‘ ಪ್ರಶಾಂತವಾದ ಈ ಬಯಲಿನಲ್ಲಿ ನಿನ್ನನ್ನು ಕಂಡು ನನಗೆ ಆಶ್ಚರ್ಯವಾಯಿತು ‘ಜಸ್ಟಿನ್ ಉತ್ತರಿಸಿದನು. 
       
       ‘ ನಮ್ಮ ಕುಟುಂಬದ ಒಬ್ಬರಿಗಾಗಿ ಕಾಯುತ್ತಿದ್ದೆ, ಆದರೆ ನೀನು ಬಂದದ್ದು ಯಾಕೆ  ? ‘ ಎಂದ ವೃದ್ಧ. 
      
       ‘ ನನ್ನ ಆಲೋಚನೆಯನ್ನು ಮತ್ತಷ್ಟು ಧ್ಯಾನಿಸಲು ಬಂದೆ ‘ 
      
       ‘ ತತ್ವಶಾಸ್ತ್ರ ಸಂತೋಷ ನೀಡುವುದೇ ? ‘
       
       ‘ ಹೌದು ‘ ತಡವರಿಸುತ್ತಾ ನುಡಿದ ಜಸ್ಟಿನ್. 
       
       ‘ ಯುವಕನೇ, ತತ್ವಶಾಸ್ತ್ರವೆಂದರೇನು ? ಸಂತೋಷವೆಂದರೇನು ? ಸ್ವಲ್ಪ ಹೇಳುವೆಯಾ ? ‘ ಎಂದ ವೃದ್ಧ. 
      
       ‘ ತತ್ವಶಾಸ್ತ್ರವೆಂದರೆ ವಾಸ್ತವತೆಯ ಪೂರ್ಣ ಜ್ಞಾನ; ಸತ್ಯದ ಸ್ಪಷ್ಟ ತಿಳಿವು. ಸಂತೋಷ ಈ ಜ್ಞಾನ ವಿವೇಕಗಳ ಫಲ ‘ ಎಂದ ಜಸ್ಟಿನ್. 
     
       ‘ ದೇವರೆಂದರೆ ಯಾರು ? ‘ ವೃದ್ಧ ಕೇಳಿದ. 
      
       ‘ ವಸ್ತುಗಳಲ್ಲಿರುವ ಅಚಲವಾದ ಶಕ್ತಿಯೇ ದೇವರು ‘ ಎಂದು ಮತ್ತೆ ತಾತ್ವಿಕ ಉತ್ತರವಿತ್ತ ಜಸ್ಟಿನ್. 
      
        ‘ ಹಾಗಾದರೆ ದೇವರನ್ನು ನೋಡದವನು ತಿಳಿಸಿದ ಹೊರತು ದೇವರನ್ನು ತಿಳಿಯಲು ಯಾರಿಗಾದರೂ ಸಾಧ್ಯವೇ ? ದೇವರನ್ನು ನೋಡದ ತತ್ವಶಾಸ್ತ್ರಜ್ಞರು ದೇವರ ಬಗ್ಗೆ ಸರಿಯಾಗಿ ತಿಳಿಸಲು ಹೇಗೆ ಸಾಧ್ಯ ? ‘‘ಶುದ್ಧವಾದ, ಯಥಾರ್ಥವಾದ ಮನಸ್ಸು ಮಾತ್ರ ದೇವರನ್ನು ತಿಳಿಯಲು ಸಾಧ್ಯ ‘ ಎಂದು ಮತ್ತೆ ಜಸ್ಟಿನ್ ಪ್ಲೇಟೋವಿನ ಉತ್ತರವಿತ್ತ.ವೃದ್ಧ ದೃತಿಗೆಡಲಿಲ್ಲ. ಪುರಾತನ ಕಾಲದ ಉಪದೇಶಕರು ದೇವರಾತ್ಮಭರಿತರಾಗಿ ಭವಿಷ್ಯತ್ತಿನ ಸಂಗತಿಗಳನ್ನು ಪ್ರವಾದಿಸಿದ್ದಾರೆ. ಅವರ ಪ್ರವಾದನೆ ಮತ್ತು ಅದ್ಬುತಕಾರ್ಯ ಅವರನ್ನು ದೇವರಾತ್ಮ ಭರಿತರೆಂದು ಹೇಳುತ್ತಿದೆ. ಜಸ್ಟಿನ್ ಸ್ತಬ್ದನಾದ.  ಉತ್ತರ ಕೊಡಲಾರದೆ ಮೌನವಾದ. ‘ನನ್ನ ಮಗನೇ, ಪ್ರಾರ್ಥಿಸು. ಬೆಳಕಿನ ಬಾಗಿಲು ನಿನಗೆ ತೆರೆಯಲಿ. ದೇವರಿಂದ ಆತನ ಮಗನಾದ ಕ್ರಿಸ್ತನಿಂದ ವಿವೇಕಿಯಾಗಿರುವವನು ಮಾತ್ರ ನಿನಗೆ ಆ ಬೆಳಕನ್ನು ವಿವರಿಸಬಲ್ಲನು ‘
         
           ಜಸ್ಟಿನ್ ಮತ್ತೆ ಆ ವೃದ್ಧನನ್ನು ಕಾಣಲಿಲ್ಲ. ಆದರೆ ಈ ಘಟನೆಯ ಬಗ್ಗೆ ಆತ ಮುಂದೆ ಈ ರೀತಿ ಬರೆದನು – ‘ ಕಿಡಿಯೊಂದು ನೇರವಾಗಿ ನನ್ನ ಆತ್ಮವನ್ನು ತಾಗಿತು………… ಕ್ರಿಸ್ತನ ಸ್ನೇಹಿತರ ಪ್ರೀತಿ ನನ್ನಲ್ಲಿ ಆವರಿಸಿತು. ಇವರ ಬೋಧನೆಯು ಸುರಕ್ಷಿತ ಮತ್ತು ಲಾಭಕರ ಎನಿಸಿತು. ಅಷ್ಟಲ್ಲದೆ…… ಯಾರೂ ರಕ್ಷಕನಿಂದ ದೂರವಿರಬಾರದೆಂಬುದೇ ನನ್ನ ಬಯಕೆ. 
      
             ಕ್ರೈಸ್ತ ಬೋಧನೆ ಎಲ್ಲ ತತ್ವಶಾಸ್ತ್ರಗಳಿಗಿಂತಲೂ ಮಿಗಿಲು ಎಂಬುದನ್ನು ತಿಳಿದ ಜಸ್ಟಿನ್ ಇತರ ತತ್ವಶಾಸ್ತ್ರಜ್ಞರಿಗೂ ಕ್ರಿಸ್ತನ ಕುರಿತು ತಿಳಿಸಿದ. ದೀಕ್ಷಾಸ್ನಾನವಾದ ಮೇಲೆ ನಾನಾ ಸ್ಥಳಗಳಿಗೆ ಭೇಟಿಕೊಟ್ಟು ಸುವಾರ್ತೆ ತಿಳಿಸಿದ. ಕ್ರೈಸ್ತ ಸಮಾಜ ವೇಗವಾಗಿ ಬೆಳೆಯುತ್ತಿದ್ದ ಪ್ರಸಿದ್ಧವಾದ ಎಫೆಸ -ಅಲೆಕ್ಸಾಂಡ್ರಿಯಾ ಮತ್ತು ರೋಮ್ ಗಳಿಗೆ ಈತ ಭೇಟಿಕೊಟ್ಟ.

           ಕ್ರೈಸ್ತರನ್ನು ಟೀಕಿಸುತ್ತಿದ್ದ ಮತ್ತು ಹಿಂಸಿಸುತ್ತಿದ್ದವರಿಗೆ ಸೂಕ್ತ ಉತ್ತರ ನೀಡಿ ಬೆಂಬಲ ನೀಡಿದ. ಸುಮಾರು 1800 ವರ್ಷಗಳ ಹಿಂದೆ ಈತ ಕ್ರೈಸ್ತರನ್ನು ಬೆಂಬಲಿಸಿ ಬರೆದ ಪತ್ರಗಳು  (ಅಪೊಲೊಜಿಸ್) ಕ್ರೈಸ್ತ ಸಾಹಿತ್ಯದಲ್ಲಿ ಅತ್ಯಂತ ಶ್ರೇಷ್ಠನೆಂದು ಹೇಳಲಾಗಿದೆ. ಜಸ್ಟಿನ್ ರೋಮಿನವರೊಡನೆ ವಾದಿಸಿದ,ತನ್ನ ಬೋಧನೆಯ ನಿಮಿತ್ತ ಬಂಧಿತನಾದ. ಕ್ರಿ. ಶ 163 ರಲ್ಲಿ ಈತನೊಡನೆ ಇನ್ನು ಕೆಲವು ಕ್ರೈಸ್ತರನ್ನು ರೋಮ ಸೇನಾಧಿಕಾರಿಯಾದ ರಸ್ಟಿಕಸ್ ಬಳಿಗೆ ತಂದರು. ಆದರೆ ಎಲ್ಲರೂ ಧೈರ್ಯವಾಗಿ ತಮ್ಮ ನಂಬಿಕೆಯನ್ನು ಸಾರಿ ಹೇಳಿದರು. ಅನ್ಯ ದೇವತೆಗಳಿಗೆ ತಾವು ಯಜ್ಞ ಅರ್ಪಿಸುವುದಿಲ್ಲವೆಂದು ಘೋಷಿಸಿದರು. ಆದ್ದರಿಂದ ಇವರೆಲ್ಲರ ತಲೆ ಕತ್ತರಿಸಿ ಕೊಲ್ಲಲಾಯಿತು. 
          
 ಮರಣದ ನಂತರ ಈತ ರಕ್ತ ಸಾಕ್ಷಿಯಾದ ಜಸ್ಟಿನ್ ಎಂದು ಪ್ರಸಿದ್ಧನಾದ. ಉಳಿದ ಕ್ರೈಸ್ತರಿಗೆ ಈತ ಮಾದರಿಯಾದ :ಮೃತ್ಯುಂಜಯನಾದ ನಜರೇತಿನ ಯೇಸುವನ್ನು ಅನುಸರಿಸಿ, ಪ್ರಾಣ ತ್ಯಾಗಕ್ಕಾದರೂ ಸಿದ್ಧನಾಗಲು ಪ್ರೇರಕನಾದ, ಅದ್ಭುತ ಮಾದರಿಯಾದ. 

Comments

Your email address will not be published. Required fields are marked *

× WhatsApp us