ನಮ್ಮೊಂದಿಗೆ ಇರುವ ಪ್ರಪಂಚದ ಅದ್ಭುತ

  Posted on   by   No comments

ಕೆಲವೊಂದು ಬಾರಿ ನಮ್ಮ ಹತ್ತಿರವೇ ಒಂದು ಅದ್ಭುತವಾದ ವಸ್ತು ಅಥವಾ ವ್ಯಕ್ತಿ ಇದ್ದರೂ ನಾವು ಅದನ್ನು ಗಮನಿಸಿರುವುದಿಲ್ಲ. ದೂರದ ವಸ್ತುವಿಗೆ ಹುಡುಕಿಕೊಂಡು ಹೋಗುತ್ತೇವೆ. ನಮ್ಮ ಜೊತೆಗೇ ಇರುವ ವಸ್ತುವಿನ ಬಗ್ಗೆ ನಮಗಷ್ಟು ತಿಳಿವಳಿಕೆಯಾಗಲೀ, ಗೌರವವಾಗಲೀ ಕಡಿಮೆ.

ಅದನ್ನು ಕಳೆದುಕೊಂಡಾಗಲೇ ಒದ್ದಾಡುತ್ತೇವೆ, ಅದರ ಬೆಲೆ ಅರ್ಥವಾಗುತ್ತದೆ. ಅಂಥದೊಂದು ವಿಶೇಷವಾದ ವಸ್ತು ನಮ್ಮ ದೇಹ. ನಾವು ಹುಟ್ಟಿದಾಗಿನಿಂದ ಉಸಿರಾಟದ ಕೊನೆಯ ಕ್ಷಣದವರೆಗೆ ನಮ್ಮಂದಿಗೇ ಇರುವ ಪ್ರಪಂಚದ ಅದ್ಭುತ. ಪ್ರಪಂಚದ ಅದ್ಭುತಗಳೆಂದೆನಿಸಿರುವ ತಾಜಮಹಲನ್ನೋ, ಪೀಸಾ ಗೋಪುರವನ್ನೋ, ಪಿರ‌್ಯಾಮಿಡ್‌ಗಳನ್ನೋ ಹುಡುಕಿಕೊಂಡು ಹೋಗುತ್ತೇವೆ.

ಆದರೆ ನಮ್ಮ ದೇಹ ಪ್ರಪಂಚದ ಅದ್ಭುತವೆನ್ನುವುದು ಹೊಳೆಯುವುದಿಲ್ಲ. ಇದು ಅದ್ಭುತ ಏಕೆಂದರೆ ಇಂಥದ್ದೇ ಒಂದು ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ. ಹಿಂದೆ ಇರಲಿಲ್ಲ, ಇಂದು ಇಲ್ಲ, ಮುಂದೆಯೂ ಇರಲಾರದು. ಈಗ ನೀವು ಓದುತ್ತ ಕುಳಿತಿದ್ದೀರಿ. ಒಂದು ಕ್ಷಣ ಗಮನಿಸಿ. ನಿಮ್ಮ ದೇಹದ ಆಕಾರ, ಬಣ್ಣ, ಚರ್ಯೆ, ಸ್ವಭಾವಗಳನ್ನು ಹೊಂದಿದ ಮತ್ತೊಂದು ದೇಹ ಎಲ್ಲಿಯೂ ಇಲ್ಲ.

ಅವಳಿ-ಜವಳಿ ಮಕ್ಕಳಿರಬಹುದು, ಬಹುಪಾಲು ಹೋಲಿಕೆ ಇದ್ದರೂ ಇರಬಹುದು. ಆದರೂ ಕೆಲವೊಂದು ವಿಭಿನ್ನತೆ, ವಿಶೇಷತೆ ಇದ್ದೇ ಇರುತ್ತದೆ. ಇಂಥ ಪರಮ ಆಶ್ಚರ್ಯವಾದ ದೇಹ ತಾನು ಇರುವುದನ್ನೇ ಮರೆಸುವಷ್ಟು ವ್ಯವಸ್ಥಿತವಾಗಿ ಕೆಲಸ ಮಾಡುತ್ತದೆ-ಅದು ತೊಂದರೆ ಕೊಡುವವರೆಗೆ.

ದೇಹದ ಯಂತ್ರದೊಳಗೆ ಅದೆಷ್ಟು ಭಿನ್ನಭಿನ್ನ ಭಾಗಗಳು! ಮಾಂಸ, ರಜ್ಜೆ, ನರಗಳು, ಮೂಳೆಗಳು ಅದೆಷ್ಟು ಸುಂದರವಾಗಿ ಚರ್ಮವೆಂಬ ಬಹುದೊಡ್ಡ ಹೊದಿಕೆಯಲ್ಲಿ ಭದ್ರವಾಗಿ ಕುಳಿತಿವೆ! ಒಳಗಿನ ಭಾಗಗಳನ್ನು ರಕ್ಷಿಸುವ ಚರ್ಮದಲ್ಲಿ ಅದೆಷ್ಟು ಕೋಟಿ, ಕೋಟಿ ಜೀವಕೋಶಗಳು! ಪ್ರತಿಕ್ಷಣವೂ ಲಕ್ಷಲಕ್ಷ ಜೀವಕೋಶಗಳು ಸಾಯುತ್ತಿದ್ದರೂ, ಅಷ್ಟೇ ಪ್ರಮಾಣದಲ್ಲಿ ಹೊಸವನ್ನು ಸೃಷ್ಟಿ ಮಾಡುತ್ತ ಪದರುಪದರಾಗಿ ಕಳೆದುಕೊಳ್ಳುತ್ತ, ಹೊಸದಾಗಿ ಹುಟ್ಟುತ್ತ, ಹಿಗ್ಗುತ್ತ, ಕುಗ್ಗುತ್ತಲಿರುವ ಚರ್ಮ ಅದ್ಭುತ.

ನಮ್ಮ ದೇಹದ ಆಕಾರ ಬದಲಾದಂತೆ ಬಟ್ಟೆಗಳು ಬಿಗಿ ಹಾಗೂ ಸಡಿಲವಾಗುವುದುಂಟು. ಆದರೆ ಚರ್ಮ ತನ್ನಷ್ಟಕ್ಕೇ ತಾನೇ ಹಿಗ್ಗುತ್ತ, ಕುಗ್ಗುತ್ತ ಒಳಗಿನ ಭಾಗಗಳನ್ನು ಕಾಪಾಡಿಕೊಳ್ಳುವುದು ನಮ್ಮ ಅರಿವಿಗೇ ಬರುವುದಿಲ್ಲ.

ಯಾವತ್ತಾದರೂ ನಿಮ್ಮ ನಾಡಿ ಬಡಿತವನ್ನು ಗಮನಿಸಿದ್ದೀರಾ. ಅಯ್ಯೋ ಸರಿಯಾಗಿ ಬಡಿಯಪ್ಪಾ, ನಿಮಿಷಕ್ಕೆ ಎಪ್ಪತ್ತೆರಡು ಬಾರಿ ಎಂದಾದರೂ ಕೇಳಿಕೊಂಡಿದ್ದುಂಟೇ. ಅದು ತನ್ನ ಪಾಡಿಗೆ ತಾನೇ ಕೆಲಸ ಮಾಡುತ್ತದೆ. ಅಥವಾ ನಿಮ್ಮ ಹೃದಯಕ್ಕೆ ಪ್ರಶ್ನೆಗಳನ್ನು ಕೇಳಿದ್ದೀರಾ. ಸರಿಯಾಗಿ ಪಂಪ್ ಮಾಡುತ್ತಿದ್ದೀಯಾ. ರಕ್ತನಾಳಗಳಲ್ಲಿ ಅಡಚಣೆ ಇಲ್ಲ ತಾನೇ.

ನಿಮಿಷಕ್ಕೆ ಎಷ್ಟು ಪ್ರಮಾಣದ ರಕ್ತ ಪಂಪ್ ಆಗುತ್ತಿದೆ. ಪಾಪ! ಅದು ಸತತವಾಗಿ ಕೆಲಸ ಮಾಡುತ್ತಲೇ ಇರುತ್ತದೆ-ನಿಲ್ಲುವವರೆಗೆ. ದೇಹದ ಪ್ರತಿಯೊಂದು ಹನಿ ರಕ್ತ, ರಕ್ತನಾಳಗಳ ಕಾಲುವೆಗಳಲ್ಲಿ ಮೂರು ನಿಮಿಷದಲ್ಲಿ ನೂರಾ ಎಪ್ಪತ್ತು ಮೈಲಿಗಳಷ್ಟು ದೂರ ಓಡಿ ಪ್ರವಾಸಮಾಡಿ ಆಮ್ಲಜನಕವನ್ನು ಬಿಡದೇ ಸಾಗಿಸುತ್ತಿರುವುದು ನಮ್ಮ ಲಕ್ಷ್ಯಕ್ಕೆ ಬರುವುದಿಲ್ಲವಲ್ಲ.

ನಮಗರಿವಿಲ್ಲದಂತೆ ಕಣ್ಣಿನ ರೆಪ್ಪೆ ಕ್ಷಣಕ್ಷಣಕ್ಕೂ ಬಡಿದು ಕಣ್ಣನ್ನು ಶುದ್ಧವಾಗಿ, ಒದ್ದೆಯಾಗಿ ಇಡುತ್ತದೆ. ಸುಮಾರು ಮೂವತ್ತೈದರಿಂದ ನಲವತ್ತು ಅಡಿ ಉದ್ದವಾದ ದೊಡ್ಡ ಮತ್ತು ಸಣ್ಣ ಕರುಳುಗಳು, ಯಕೃತ್ತು, ಮೂತ್ರಪಿಂಡಗಳು ಎಲ್ಲವನ್ನು ಭಗವಂತ ಎಷ್ಟು ಸುಂದರವಾಗಿ ಕೇವಲ ಹದಿನೈದು ಇಪ್ಪತ್ತು ಇಂಚಿನ ಹೊಟ್ಟೆಯೆಂಬ ಚೀಲದಲ್ಲಿ ತುಂಬಿ ಇಟ್ಟಿದ್ದಾನೆ.

ಅವುಗಳನ್ನು ಸರಿಯಾಗಿ ಜೋಡಿಸದಿದ್ದರೆ ನಮ್ಮ ದೇಹ ಕನಿಷ್ಠ ಎಂಟರಿಂದ ಹತ್ತು ಫೂಟು ಉದ್ದವಾಗಬೇಕಿತ್ತು! ಎಂದಾದರೂ ಮಿದುಳಿಗೆ ಚಿಂತಿಸು ಎಂದು ಹೇಳಿದ್ದುಂಟೇ. ಅದು ಬೇಡವೆಂದರೂ ಚಿಂತಿಸುವುದನ್ನು ಬಿಡಲಾರದು. ಇಂಥ ಸುಂದರವಾದ ದೇಹ ಒಂದು ಮಂದಿರವಿದ್ದಂತೆ. ಅದನ್ನು ಸುಂದರವಾಗಿ, ಸುಭದ್ರವಾಗಿ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯ.

ಅದು ಒಂದು ಬಲಿಷ್ಠವಾದ ಕುದುರೆ. ಅದನ್ನು ಸರಿಯಾಗಿ ಪೋಷಿಸಿ, ಕಡಿವಾಣ ತೊಡಿಸಿ ಹಿಡಿದರೆ ನಮ್ಮನ್ನು ಗುರಿ ಸೇರಿಸುತ್ತದೆ. ಇಂಥ ಪ್ರಪಂಚದ ಅದ್ಭುತವೆನ್ನಿಸಿದ ದೇಹವನ್ನು ನೀಡಿದ ಸೃಷ್ಟಿಗೆ ನಮ್ಮ ಕೃತಜ್ಞತೆಗಳು ಸದಾ ಸಲ್ಲಬೇಕು.

Categories: Blog

Comments

Your email address will not be published. Required fields are marked *

× WhatsApp us