ಲಿಂಕನ್ ಮಾದರಿ

  Posted on   by   No comments

ಅಮೆರಿಕದ ಆಂತರಿಕ ಯುದ್ಧ ತಾರಕಕ್ಕೇರಿತ್ತು. ದಕ್ಷಿಣದ ಹತ್ತಿ ಬೆಳೆಯುವ ಜಮೀನ್ದಾರರು, ತಮ್ಮ ಶಕ್ತಿಗಳನ್ನು ಕಳೆದುಕೊಳ್ಳುತ್ತಿದ್ದರು. ಆದರೆ ಸಾವು ನೋವುಗಳು ಅಪಾರ ಸಂಖ್ಯೆಯಲ್ಲಿ ಆಗುತ್ತಿದ್ದವು. ಎಲ್ಲರ ಬದುಕು ದುರ್ಭರವಾಗಿತ್ತು. ಪ್ರತಿಮನೆಯೂ ಸ್ಮಶಾನವೇ. ಯಾರ ಮುಖದಲ್ಲೂ ಕಳೆ ಇಲ್ಲ. ಅಟ್ಲಾಂಟಾ ನಗರದ ಹೊರವಲಯದಲ್ಲಿ ಘನಘೋರ ಯುದ್ಧ ನಡೆಯುತ್ತಿತ್ತು. ಆಗ ಯುದ್ಧದಲ್ಲಿ ಅಮೆರಿಕ ಸೈನ್ಯದ ಜನರಲ್ ಆಗಿದ್ದ ಜಾರ್ಜ ಮ್ಯೋಕ್‌ಲೆಲನ್ ಅವರನ್ನು ಭೆಟ್ಟಿಯಾಗಲು ರಾಷ್ಟ್ರಪತಿ ಲಿಂಕನ್ ಮತ್ತು ರಕ್ಷಣಾ ಕಾರ್ಯದರ್ಶಿ ಅಟ್ಲಾಂಟಾಕ್ಕೆ ಹೋದರು. ಸುಂದರವಾದ ನಗರ ರಣಭೂಮಿಯಾಗಿದೆ. ಎಲ್ಲಿ ನೋಡಿದಲ್ಲಿ ಬೆಂಕಿ, ಹಾಹಾಕಾರ, ಸಾವು, ನೋವಿನ ಕಿರಿಚುವಿಕೆಯೇ ಕಂಡು ಬರುತ್ತಿದ್ದವು. ಇವರಿಬ್ಬರೂ ಜನರಲ್ ವಾಸವಾಗಿದ್ದ ತಾತ್ಪೂರ್ತಿಕ ಮನೆಗೆ ಹೋದರು. ಇನ್ನೂ ಜನರಲ್ ಯುದ್ಧ ಭೂಮಿಯಿಂದ ಮರಳಿ ಬಂದಿರಲಿಲ್ಲ. ಇವರು ಒಂದು ತಾಸು ಮನೆಯ ಮುಂದಿನ ಕೊಠಡಿಯಲ್ಲೇ ಕಾದರು. ಜನರಲ್ ಬಂದ ತಕ್ಷಣ ತಾವು ಬಂದಿರುವುದನ್ನು ತಿಳಿಸಬೇಕೆಂದು ಅಲ್ಲಿದ್ದ ಅಧಿಕಾರಿಗೆ ಹೇಳಿದ್ದರು. ಸ್ವಲ್ಪ ಹೊತ್ತಿನ ನಂತರ ಮನೆಯ ಮುಂದೆ ಕುದುರೆ ನಿಂತಿತು. ಇವರಿಗೆ ಕಿಟಕಿಯಿಂದ ಜನರಲ್ ಕುದುರೆಯ ಮೇಲಿನಿಂದ ಕೆಳಗಿಳಿಯುವುದು ಕಾಣಿಸಿತು. ಜನರಲ್ ಭುಜಕ್ಕೆ ಗಾಯವಾಗಿ ರಕ್ತ ಒಸರುತ್ತಿದೆ, ಬಟ್ಟೆಗಳೆಲ್ಲ ಕೊಳಕಾಗಿವೆ, ಮುಖದಲ್ಲಿ ಚಿಂತೆ ಮಡುಗಟ್ಟಿ ನಿಂತಿದೆ. ಆತ ಕೆಳಗಿಳಿದವನೇ ಕುದುರೆಯ ಲಗಾಮನ್ನು ಸೈನಿಕನ ಕೈಗೆ ಕೊಟ್ಟು, ಕುದುರೆಯನ್ನು ಚೆನ್ನಾಗಿ ನೋಡಿಕೋ, ನಾಳೆ ಮತ್ತೆ ಯುದ್ಧಕ್ಕೆ ಸಿದ್ಧವಾಗಬೇಕು ಎಂದು ಹೇಳಿ ಮನೆಯೊಳಗೆ ಕಾಲಿಟ್ಟ. ಅಧಿಕಾರಿ ಜನರಲ್‌ನಿಗೆ ರಾಷ್ಟ್ರಪತಿಗಳು ಮತ್ತು ರಕ್ಷಣಾ ಕಾರ್ಯದರ್ಶಿಗಳು ಬಂದು ಕುಳಿತಿರುವ ವಿಷಯ ತಿಳಿಸಿದ. ಜನರಲ್ ತನ್ನ ಭಾರವಾದ ಕಣ್ಣುಗಳನ್ನೆತ್ತಿ ನೋಡಿ ಅಧ್ಯಕ್ಷರು ಕುಳಿತಿದ್ದ ಕೊಠಡಿಯಲ್ಲಿ ಕಾಲಿಟ್ಟ. ಅಧ್ಯಕ್ಷರನ್ನು ನೋಡಿ ಸೆಟೆದು ನಿಂತು ಸೆಲ್ಯೂಟ್ ನೀಡಿ, ನಿಧಾನವಾಗಿ ಹೊರಗೆ ನಡೆದ!

ಅವನು ಬಟ್ಟೆ ಬದಲಾಯಿಸಿ ಬರಬಹುದೆಂದು ಇವರಿಬ್ಬರೂ ಸ್ವಲ್ಪ ಹೊತ್ತು ಕಾದು ಕುಳಿತರು. ಅರ್ಧಗಂಟೆಯಾದ ಮೇಲೂ ಜನರಲ್ ಬರದಿದ್ದಾಗ ಅಧಿಕಾರಿಯನ್ನು ಕೇಳಿದರು. ಆತ ಮೇಲೆ ಹೋಗಿ ನೋಡಿ ಬಂದು ಹೇಳಿದ, ಜನರಲ್‌ಗೆ ತುಂಬ ಆಯಾಸವಾಗಿದೆ. ಅವರು ಬ್ಯಾಂಡೇಜ್ ಹಾಕಿಸಿಕೊಂಡು ನಿದ್ರೆ ಹೋಗಿದ್ದಾರೆ ಎಂದ. ರಕ್ಷಣಾ ಕಾರ್ಯದರ್ಶಿ ಸಿಟ್ಟಿನಿಂದ ಬೆಂಕಿಯಾದ, `ಅಧ್ಯಕ್ಷರೇ, ಇದೆಂಥ ಉದ್ಧಟತನ? ಈ ಜನರಲ್‌ನನ್ನು ಈ ಕ್ಷಣದಿಂದಲೇ ಹುದ್ದೆಯಿಂದ ಕೆಳಗಿಳಿಸಿಬಿಡಬೇಕು. ರಾಷ್ಟ್ರದ ಅಧ್ಯಕ್ಷರನ್ನು ಇಷ್ಟು ಕೇವಲವಾಗಿ ನೋಡಿದ ಯಾವ ವ್ಯಕ್ತಿಯನ್ನೂ ನಾನು ನೋಡಿಲ್ಲ’ ಎಂದು ಹ್ಞೂಂಕರಿಸಿದ. ಕ್ಷಣಕಾಲ ಸುಮ್ಮನಿದ್ದ ಲಿಂಕನ್ ಹೇಳಿದರು. `ಛೇ, ಜನರಲ್‌ರನ್ನು ಕೆಳಗಿಳಿಸುವುದೇ, ಸಾಧ್ಯವಿಲ್ಲ. ಆ ಮನುಷ್ಯ ನಮಗಾಗಿ ಹೋರಾಡುತ್ತಿದ್ದಾನೆ. ನಾವು ಭದ್ರವಾಗಿದ್ದು ಬರಿ ವಾರ್ತೆಗಳನ್ನು ಕೇಳುವವರು. ಆತ ಯುದ್ಧದ ಮುಂಚೂಣಿಯಲ್ಲಿ ನಿಂತು, ತನ್ನ ಜೀವವನ್ನೇ ಒತ್ತೆ ಇಟ್ಟು ಹೋರಾಡುತ್ತ, ಮುಗ್ಧ ನಿರಪರಾಧಿ ತರುಣರು ಕ್ಷಣಕ್ಷಣವೂ ಸಾಯುತ್ತಿರುವುದನ್ನು ನೋಡುತ್ತ, ಯುದ್ಧವನ್ನು ನಿಲ್ಲಿಸಲು ಸದಾ ಪ್ರಯತ್ನಿಸುತ್ತಿದ್ದಾನೆ. ಅವನ ಮೈಯಿಂದ ಹರಿಯುತ್ತಿರುವ ರಕ್ತವನ್ನು ನೋಡಿದಿರಾ. ಅವನು ತನ್ನ ಪ್ರಯತ್ನದಿಂದ ಒಂದು ತಾಸಿನ ಮಟ್ಟಿಗೆ ಯುದ್ಧವನ್ನು ನಿಲ್ಲಿಸಿ, ರಕ್ತದ ಕೋಡಿ ಹರಿಯುವುದನ್ನು ತಡೆದರೆ ನಾನು ಅವನ ಕುದುರೆಯ ಮೈತಿಕ್ಕಿ, ಬೂಟುಗಳ ಮೇಲಿನ ಧೂಳನ್ನು ಕೈಯಿಂದ ಒರೆಸಲು ಸಿದ್ಧನಿದ್ದೇನೆ. ಅವನ ಪರಿಶ್ರಮದ ಬೆವರಿನ ಹನಿಗಿಂತ ನನ್ನ ರಾಷ್ಟ್ರಪತಿ ಹುದ್ದೆ ದೊಡ್ಡದಲ್ಲ. ನಡೆಯಿರಿ. ಆತ ವಿಶ್ರಾಂತಿ ಪಡೆದು ನಾಳಿನ ಯುದ್ಧಕ್ಕೆ ಸಿದ್ಧನಾಗಲಿ’ ಹೀಗೆ ಹೇಳಿ ನಡೆದರು ಲಿಂಕನ್. ಇದು ಲಿಂಕನ್ ಮಾದರಿ. ತನ್ನ ಸ್ಥಾನ ದೊಡ್ಡದೆಂದು ಅಹಂಕಾರ ತೋರದೆ ಮತ್ತೊಬ್ಬರ ಪರಿಶ್ರಮದ ಬೆಲೆ ಅರಿತು ಅದನ್ನು ಮೆಚ್ಚಿ ತಾವು ಸಣ್ಣವರಾಗದೇ ಮತ್ತಷ್ಟು ದೊಡ್ಡವರಾದರು. ಇದು ಎಲ್ಲ ನಾಯಕರಿಗೂ ಮಾದರಿಯಾಗಬೇಕಾದದ್ದು.

Categories: Blog

Comments

Your email address will not be published. Required fields are marked *

× WhatsApp us